ವೈಟ್ ಹೊಟೇಲ್: ಕೋಣೆಗೊಬ್ಬ ಕಲಾವಿದ - ಕಲಾವಿದನಿಗೊಂದು ಕೋಣೆ

ಛಳಿಗಾಲದಲ್ಲಿ ನಡುಗಾಡುತ್ತಾ ಇಲ್ಲಿಗೆ ಬಂದು ಪಾಠಮಾಡುವುದು ಗಮ್ಮತ್ತಿನ ವಿಷಯವೇನೂ ಅಲ್ಲ. ಭಾಷೆ ಬಾರದ, ಊಟ ಒಗ್ಗದ, ಈ ಜಾಗದಲ್ಲಿ ನಾನು ಅನಕ್ಷರಸ್ಥ - ಬರೇ ಫ್ರೆಂಚ್ ಮತ್ತು ಫ್ಲೆಮಿಷ್ ಮಾತನಾಡುವ ಈ ಬಹುಭಾಷಾ ನಗರದಲ್ಲಿ ನಾನು ಇಳಿದಾಗಲೆಲ್ಲಾ ಒಂದೊಂದು ಹೆಜ್ಜೆಗೂ ಜನರನ್ನು ಮುಂದಿನ ಅಡಿ ಎಲ್ಲಿಡಬೇಕೆಂದು ಕೇಳಿಕೊಳ್ಳುತ್ತಾ ನಡೆಯಬೇಕು. ನಕ್ಷೆಗಳನ್ನು ನೋಡಿ ಓಡಾಡುವ ಜನರ ಮಧ್ಯೆ ಮತ್ತೆ ಮತ್ತೆ ದಾರಿ ಕೇಳುವ ವಿಚಿತ್ರಕ್ಕಿಳಿಯಬೇಕು. ಹಲವು ಬಾರಿ ನಕ್ಷೆಗಳೂ ಅವರ ಭಾಷೆಯಲ್ಲೇ ಇರುತ್ತವೆ. ಹೋಗಲಿ ಕಂಪ್ಯೂಟರನ್ನು ತಗೆದು ಗೂಗಲ್ ಭಗವಾನನ ಮೊರೆ ಹೋಗಬೇಕೆಂದರೆ ಆತನೂ ಸ್ಥಳೀಯ ಭಾಷೆಯನ್ನು ಬಿಟ್ಟು ಆಂಗ್ಲಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಾನೆ. ಹೀಗೆ ೨೪ ರಾಷ್ಟ್ರಗಳ ಪ್ರತಿನಿಧಿಸುವ ವಿದ್ಯಾರ್ಥಿವೃಂದಕ್ಕೆ ಭಾರತೀಯ ಮೈಕ್ರೊಫೈನಾನ್ಸ್ ಬಗ್ಗೆ ಲೆಕ್ಚರುಗಳನ್ನು ಕುಟ್ಟುವುದು ಸುಲಭವಲ್ಲ. ಮೊದಲ ದಿನದಂದೇ ನಾನು ಕ್ಲಾಸಿಗೆ ಹೇಳಿಬಿಟ್ಟೆ. ನನ್ನ ಉಚ್ಚಾರದಿಂದಾಗಿ ಯಾರಿಗಾದರೂ ತೊಂದರೆಯಿದ್ದರೆ ಅದನ್ನು ಭರಿಸಬೇಕು. ನಾವು ಭಾಷೆಯನ್ನು ಆಡುವುದೇ ಹೀಗೆ. ಹೇಗೆ ಹೊರಗಿನವರು ನಮ್ಮಲ್ಲಿಗೆ ಪಾಠಮಾಡಲು ಬಂದಾಗ ತಮ್ಮ ಉಚ್ಚಾರವನ್ನು ಬದಲಾಯಿಸುವುದಿಲ್ಲವೋ ಹಾಗೆಯೇ ನಾನೂ ಬದಲಾಯಿಸಲಾರೆ. ಆದರೆ ಶರವೇಗದಲ್ಲಿ ಮಾತನಾಡುವುದಕ್ಕೆ ಬದಲಾಗಿ ನಿಧಾನವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ. ಹಾಗೂ ಹೀಗೂ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಹೋದಬಾರಿ ಇದೇ ಯೂನಿವರ್ಸಿಟಿಯಲ್ಲಿ ಸೆಮಿನಾರು ಕುಟ್ಟಿದ್ದಾಗ ಇದ್ದದ್ದು ಮೂರೂ ಮತ್ತೊಂದು ಮಂದಿ. ಈ ಬಾರಿ ನಲವತ್ತು ವಿದ್ಯಾರ್ಥಿಗಳಿದ್ದಾರೆ. ಪರವಾಗಿಲ್ಲ. ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಿದ್ದೇನೆ!!

ಈಬಾರಿ ಬ್ರಸಲ್ಸ್ ಬಿಟ್ಟು ಬೇರೆಲ್ಲೂ ಹೋಗಬೇಕಾಗಿಲ್ಲ. ಛಳಿಯಂದರೆ ಎಷ್ಟು ಹಿಂಸೆ ಅನ್ನುವುದು ಇಲ್ಲಿಗೆ ಬಂದಾಗಲೆಲ್ಲಾ ತಿಳಿಯುತ್ತದೆ. ನೆತ್ತಿಯಿಂದ ಕಾಲಿನವರೆಗೂ ಬ್ಯಾಂಡೇಜ್ ಸುತ್ತಿದಂತೆ ಉಣ್ಣೆ ಧರಿಸಬೇಕು. ಕಟ್ಟಡದ ಒಳಹೊಕ್ಕಕೂಡಲೇ ಎಲ್ಲವನ್ನೂ ಬಿಚ್ಚಿಡಬೇಕು. ಈ ಭಾರವನ್ನು ಹೊತ್ತು ನಡೆವ ಹಿಂಸೆಯ ಜೊತೆಗೇ ದಿನವೂ ಬ್ರೆಡ್ಡು ತಿನ್ನುತ್ತಾ ಮೀನು ಸಸ್ಯಾಹಾರವಲ್ಲ ಎನ್ನುವ ಪಾಠವನ್ನು ಎಲ್ಲರಿಗೂ ಹೇಳುತ್ತಾ ಜೀವಸಬೇಕಿದೆ. 

ಭಾರತದಿಂದ ಪ್ಯಾರಿಸ್ ಮಾರ್ಗವಾಗಿ ಬ್ರಸಲ್ಸಿಗೆ ಬಂದೆ. ಯೂನಿವರ್ಸಿಟಿಯವರು ಕೊಟ್ಟ ಟಿಕೇಟು ವಿಮಾನದ್ದಾಗಿದ್ದರೂ, ಪ್ಯಾರಿಸ್ಸಿಗೆ ಬಂದಾಗ ತಿಳಿದದ್ದೇನೆಂದರೆ ಆ ಟಿಕೆಟ್ಟು ಪ್ಯಾರಿಸ್ಸಿನವರೆಗೂ ವಿಮಾನದ್ದು, ಅಲ್ಲಿಂದ ಬ್ರಸಲ್ಸಿಗೆ ಇದ್ದ ಟಿಕೇಟು ವಿಮಾನದ ಟಿಕೇಟಿನಂತೆ ಕಾಣುವ ರೈಲು ಟಿಕೇಟು. ಹೀಗಾಗಿ ಪ್ಯಾರಿಸ್ಸಿನಿಂದ ಸೂಪರ್‌ಫಾಸ್ಟಾಗಿ ಬರುವು ಟಿಜಿವಿಯಲ್ಲಿ ಒಂದು ಬೋಗಿ ಏರ್ ಫ್ರಾಂಸಿನ ಯಾತ್ರಿಕರಿಗೆ ಮೀಸಲು. ಒಂದು ಥರದಲ್ಲಿ ಇದೂ ಒಳ್ಳೆಯದೇ ಆಯಿತು. ಸೂಪರ್ ಸ್ಪೀಡಿನ ರೈಲಿನಲ್ಲಿ ಕೂತು, ಇಲ್ಲಿನ ಪಕೃತಿಯನ್ನ ಆನಂದಿಸುತ್ತಾ ಬಂದದ್ದಾಯಿತು. ಬ್ರಸಲ್ಸಿಗೆ ಬಂದ ಕೂಡಲೇ ವೈಟ್ ಹೋಟೇಲಿಗೆ ಟ್ಯಾಕ್ಸಿ ತೆಗೆದುಕೊಂಡೆ. ಇದ್ದ ಹತ್ತು ನಿಮಿಷದಲ್ಲಿ ಟ್ಯಾಕ್ಸಿಯ ಚಾಲಕ ನಾನು ಭಾರತೀಯನೆಂದು ಅರಿತ ಕೂಡಲೇ ಆತಂಕವಾದದ ಮಾತನ್ನು ಆಡಿದ. ಮುಂಬೈ ಕಾಂಡದ ಬಗ್ಗೆ ಚರ್ಚಿಸಿದ. ಅವನ ಜ್ಞಾನವಿಸ್ತಾರ ಕಂಡು ನಾನು ಅವಾಕ್ಕಾದೆನೆಂದೇ ಹೇಳಬೇಕು. ಸಾಮಾನ್ಯವಾಗಿ ಇಲ್ಲಿ ಎಲ್ಲಿ ಹೋದರೂ ಏನು ಮಾಡಿದರೂ ಪಡೆದ ಸೇವೆಗೆ ಕೃತಜ್ಞತೆಯಾಗಿ ಟಿಪ್ ಕೊಡುವುದು ವಾಡಿಕೆ. ಟಿಪ್ ಕೊಡದಿದ್ದಲ್ಲಿ ಯಾರೂ ಏನೂ ಅನ್ನುವುದಿಲ್ಲವಾದರೂ ಅವರ ನೋಟದಲ್ಲೇ ಅಸಮಾಧಾನವನ್ನು ಸ್ಪಷ್ಟವಾಗಿ ಕಾಣಬಹುದು. ಹೀಗಾಗಿಯೇ ಸ್ಟೇಷನ್ನಿನಿಂದ ಹೊಟೇಲಿಗೆ ೯.೮೦ ಯೂರೋಗಳಾದಾಗ, ಹನ್ನೊಂದು ಯೂರೋ ತೆಗೆದುಕೊಂಡು ಅಷ್ಟಕ್ಕೆ ರಸೀದಿ ಕೊಡು ಎಂದು ನಾನು ಚಾಲಕನಿಗೆ ಹೇಳಿದೆ. ಅವನು ಹನ್ನೊಂದು ಯೂರೋಗಳಿಗೆ ರಸೀದಿಯನ್ನೇನೋ ಕೊಟ್ಟ. ನನ್ನ ಬಳಿ ಚಿಲ್ಲರೆ ಇರಲಿಲ್ಲವಾದ್ದರಿಂದ ಇಪ್ಪತ್ತು ಯೂರೋಗಳ ನೋಟನ್ನು ಕೊಟ್ಟೆ. ಅವನು ತನ್ನ ಪರ್ಸನ್ನು ತಡಕಿ ಹತ್ತು ಯೂರೋ ಚಿಲ್ಲರೆ ಕೊಟ್ಟ! "ನೀನು ಒಳ್ಳೆಯ ಮನುಷ್ಯ, ಒಳ್ಳೆಯ ದೇಶದಿಂದ ಬಂದಿದ್ದೀಯ, ಪರವಾಗಿಲ್ಲ ನಿನ್ನಟಿಪ್ ಬೇಡ" ಅಂದ! ಹೀಗೆ ನಾನು ಹನ್ನೊಂದು ಯೂರೋಗಳ ರಸೀತಿ ಹಿಡಿದು, ಹತ್ತೇ ಯೂರೋಗಳನ್ನು ಅವನಿಗೆ ಕೊಟ್ಟು, ಟಿಪ್ಪನ್ನು ನಾನೇ ಪಡೆದಿದ್ದೆ! ಹೊಚ್ಚ ಹೊಸ ಮರ್ಸಿಡಿಸ್‍ನಲ್ಲಿ ಕೂತು, ವಿಶ್ವದ ರಾಜಕೀಯ ಮಾತನಾಡುವ, ಮೊರೊಕ್ಕೋ ದೇಶಕ್ಕೆ ಸೇರಿದ, ಟೈ ಧರಿಸಿದ ಟ್ಯಾಕ್ಸಿ ಚಾಲಕನ ಕೈಯಿಂದ ಒಂದು ಯೂರೋ ಟಿಪ್ ಪಡೆಯುವುದಕ್ಕಿಂದ ದೊಡ್ಡ ಐಷಾರಾಮ ಏನಿರಬಹುದೆಂದು ಯೋಚಿಸಿದೆ!

ಆದರೆ ಈ ಎಲ್ಲದರ ನಡುವೆ ಒಂದು ಆಶ್ಚರ್ಯ ನನಗೆ ಕಾದಿತ್ತು. ಅದೆಂದರೆ ಯೂನಿವರ್ಸಿಟಿಯವರು ನನಗಾಗಿ ಬುಕಿಂಗ್ ಮಾಡಿದ್ದ ವೈಟ್ ಹೊಟೇಲು. ಐಷಾರಾಮದ ಚರ್ಚೆಯ ನಡುವೆ ಇದನ್ನು ಐಷಾರಾಮದ ಪ್ರತೀಕ ಎಂದು ಯಾರಾದರೂ ಕರೆವ ಮೊದಲೇ ಒಂದೆರಡು ಮಾತು ಹೇಳಿಬಿಡುತ್ತೇನೆ.. ವೈಟ್ ಹೋಟೇಲು ನನಗೆ ಕೊಟ್ಟ ರೂಮಿನಲ್ಲಿ ಕುಡಿಯುವ ನೀರು ಸಹ ಲಭ್ಯವಿಲ್ಲ. ಕಡೆಗೆ ಒಂದು ಗ್ಲಾಸಾಗಲೀ, ತಟ್ಟೆಯಾಗಲೀ, ಚಮಚ ಕೂಡಾ ಇಲ್ಲ. ಹೀಗಾಗಿ ಖಾರದ ಊಟಕ್ಕೆಂದೇ ತಂದ ಎಂ.ಟಿ.ಆರ್ ಪೊಟ್ಟಣಗಳಿಂದ ನೇರವಾಗಿಯೇ ತಣ್ಣಗಿನ ಬಿಸಿಬ್ಯಾಳೆಭಾತ್ ತಿನ್ನುವ ಪರಿಸ್ಥಿತಿಯಲ್ಲಿ ಇದ್ದೇನೆ. ಆದರೂ ವೈಟ್ ಹೋಟೇಲು ಆಸಕ್ತಿ ಉಂಟುಮಾಡುವ ಹೊಟೇಲು. ಅದಕ್ಕೆ ಕಾರಣವೇ ಬೇರೆ.


೧೨.೦೦ಕ್ಕೆ ಹೋಟೇಲು ತಲುಪಿದಾಗ ಅಲ್ಲಿದ್ದ ಹೆಂಗಸು ಗಡುಸಾಗಿ "ನಿನ್ನ ಬುಕಿಂಗ್ ಇರುವುದು ಮೂರರ ನಂತರ, ಬೇಕಿದ್ದರೆ ಲಗೇಜನ್ನು ಒಂದು ಮೂಲೆಯಲ್ಲಿಟ್ಟು ಆಚೆ ತಿರುಗಾಡಿ ಬಾ" ಎಂದಳು. ಇದೂ ನನಗೆ ವಿಚಿತ್ರ ಅನುಭವ! ಹನ್ನೆರಡು ಗಂಟೆಕಾಲ ಪ್ರಾಯಾಣ ಮಾಡಿ ದೇಶಾಂತರ, ಸಮಯಾಂತರ, ತಾಪಮಾನಾಂತರವನ್ನು ಕಾಣುತ್ತಿರುವ ನನಗೆ ಶೂನ್ಯ ಡಿಗ್ರಿಯ ವಾತಾವರಣದಲ್ಲಿ ಹೊರಗೆ ಸುತ್ತಾಡಿ ಬಾರೆನ್ನುವ ಈ ಚಿತ್ರಹಿಂಸೆ ಸಾಮಾನ್ಯದ್ದಲ್ಲ. ಹತ್ತು ವರುಷಗಳ ಕೆಳಗಾಗಿದ್ದರೆ ಇದನ್ನು ಒಂದು ಭೇದಭಾವದ ವಿಷಯವನ್ನಾಗಿಮಾಡಿ ಸಿಟ್ಟಾಗಿ ಕೂಗಾಡುತ್ತಿದ್ದೆ. ಹಣ ಕೊಟ್ಟು ನನಗಾಗಿ ಕಾಯ್ದಿರಿಸಿದ ಕೋಣೆ ತಕ್ಷಣಕ್ಕೆ ಯಾಕೆ ಕೊಡುತ್ತಿಲ್ಲವೆಂದು ಹಾರಾಡುತ್ತಿದ್ದೆ. ಆದರೆ ಈ ಮಧ್ಯೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುವ ಯತ್ನ ಮಾಡುತ್ತಿರುವುದರಿಂದ "ಪರವಾಗಿಲ್ಲ, ಕಾಯುತ್ತೇನೆ" ಎಂದು ಅಲ್ಲಿಯೇ ಕೂತೆ. "ಕಾಯುತ್ತೀರಾ? ಮೂರು ಘಂಟೆಗಳ ಕಾಲ?" ಎಂದಳು ಆ ಹೆಂಗಸು. "ಹೌದು, ಏನು ಮಾಡುವುದು? ನಿಮ್ಮ ಕಷ್ಟವೂ ನಾನು ಅರ್ಥಮಾಡಿಕೊಳ್ಳಬಲ್ಲೆ, ಕೋಣೆಯೇ ಇಲ್ಲವೆಂದರೆ ನೀವು ತಾನೇ ಏನು ಮಾಡಬಲ್ಲಿರಿ?" ಎಂದು ಕೇಳಿದೆ. ಆಕೆಯೇ "ಬೇರೆ ದಾರಿ?" ಎಂದು ಕೇಳಿದಳು. "ನನಗೆ ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು ಅವಕಾಶವಾದರೆ, ನೀವು ಹೇಳಿದಂತೆ ಎರಡು ಘಂಟೆಕಾಲ ಹೊರಗೆ ಸುತ್ತಲು ಅಭ್ಯಂತರವಿಲ್ಲ" ಅಂದೆ. ಕಡೆಗೂ ಆಕೆ ಒಳಹೋಗಿ, ಬೇರೆ ಯಾರೋ ಇದ್ದ ರೂಮಿನ ಬೀಗದ ಕೈ ಕೊಟ್ಟು "ಆತನ ಪರವಾನಗಿ ಪಡೆದಿದ್ದೇನೆ. ಅಲ್ಲಿ ನೀವು ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ಮತ್ತೆ ಸೂಟ್‍ಕೇಸನ್ನು ತನ್ನಿ, ಮೂರು ಘಂಟೆಗೆ ಖಂಡಿತವಾಗಿಯೂ ನಿಮ್ಮ ರೂಮು ತಯಾರಿರುತ್ತದೆ" ಅಂದಳು.

ಈ ಅವಕಾಶ ನನಗೆ ಪ್ರಾಪ್ತವಾದದ್ದು ಒಂದು ರೀತಿಯಿಂದ ಒಳ್ಳೆಯದೇ ಆಯಿತು. ಇಲ್ಲಿ ಪ್ರತಿ ಕೋಣೆಯೂ ತನ್ನದೇ ಪ್ರತ್ಯೇಕತೆಯಿಂದ ಕೂಡಿದೆ. ಒಂದೊಂದು ಕೋಣೆಯನ್ನೂ ಒಬ್ಬೊಬ್ಬ ಕಲಾವಿದನು ಸುಪರ್ದಿಗೆ ಕೊಟ್ಟು ಆತನಿಗಿಷ್ಟ ಬಂದಂತೆ ಡಿಸೈನ್ ಮಾಡಲು ಆ ಹೊಟೇಲು ಅವಕಾಶ ಕೊಟ್ಟಿದೆ. ಹೀಗಾಗಿ ಹೋಟೇಲು ಒಂದು ವಿಚಿತ್ರ ರೀತಿಯಲ್ಲಿ ಸುಂದರವಾಗಿಯೂ ಭಿನ್ನವಾಗಿಯೂ ಇರುವುದಲ್ಲದೇ ಇಲ್ಲಿನ ಜನರ ಕಲೆಗಾರಿಕೆಯ ಪ್ರದರ್ಶನಾಲಯವೂ ಆಗಿದೆ. ಎಲ್ಲರೂ ಬೆಲ್ಜಿಯಂನ ಕಲಾವಿದರಾದ್ದರಿಂದ ಅದು ಅವರಿಗೆ 
ಹೆಮ್ಮೆಯ ವಿಷಯವೂ ಹೌದು. ಹೀಗೆ ನಾನು ಹೋದ ಮೊದಲ ಕೋಣೆಯನ್ನು ರೂಪಿಸಿದವನು ನಿಕೊಲಾಸ್ ಡೆಸ್ಟಿನೋ. ಏಣಿಯಾಕಾರದ ದೀಪವನ್ನು ಅವನು ರೂಪಿಸಿದ್ದ. ಈ ಏಣಿಯನ್ನು ಬೇಕಾದ ಕಡೆಗೆ ತೆಗೆದೊಯ್ದು ಆ ಜಾಗಕ್ಕೆ ಬೆಳಕನ್ನು ನೀಡಬಹುದು. ಅವನ ಚಿತ್ರ, ಅವನ ಕಲೆಯ ವೈಷಿಷ್ಯತೆಗಳನ್ನು ವಿವರಿಸುವ ಒಂದು ಪುಟ್ಟ ಫಲಕವೂ ಆ ಕೋಣೆಯಲ್ಲಿತ್ತು. ನಾನು ಸ್ನಾನ ಮಾಡಲು ಬಳಸಿದ ಬಾತ್‍ರೂಮಿನಲ್ಲಿ ಒಂದು ಚೌಕಾಕಾರದ ಪುಟ್ಟ ಕಟ್ಟೆ, ಮತ್ತು ಅದರ ಸುತ್ತಲೂ ಕರ್ಟನ್, ಅಲ್ಲಿ ಷವರಿನ ಕೆಳಗೆ ನಿಂತು ಚೆನ್ನಾಗಿ ಸ್ನಾನ ಮಾಡಿಕೊಂಡೆ. ಕೆಳಕ್ಕೆ ಬಂದು ಸೂಟ್‌ಕೇಸನ್ನು ಬಿಟ್ಟು ಹೊರಕ್ಕೆ ಹೆಜ್ಜೆ ಹಾಕಿದೆ. ಹೊಟ್ಟೆಯೂ ಹಸಿಯುತ್ತಿತ್ತು....

ನನ್ನ ಕೈಗೆ ಆಕೆ ಅಲ್ಲಿನ ನಕ್ಷೆಯನ್ನು ತುರುಕಿದಳು. ನಕ್ಷೆ ಬಿಡಿಸಿ ನೋಡಿದೆ. ಊಟ ಹುಡುಕುತ್ತಲೇ ಮಾರನೆಯ ದಿನ ಲೆಕ್ಚರ್ ಗುದ್ದಲು ಹೋಗಬೇಕಿದ್ದ ಯೂನಿವರ್ಸಿಟಿಯ ದಿಕ್ಕಿನಲ್ಲಿ ನಡೆದರೆ ಹೇಗೆ? ಎಂದು ಯೋಚಿಸಿದೆ. ಹೀಗೆ ಹಾಕಿಕೊಂಡ ಟೂ ಇನ್ ವನ್ ಉದ್ದೇಶದ ಜೊತೆಗೆ ಅಂಗಡಿ ತೆರೆದಿದ್ದರೆ ಫೋನಿಗೆ ಒಂದು ಸಿಮ್ ಕಾರ್ಡನ್ನೂ ಕೊಂಡುಕೊಳ್ಳಬಹುದಿತ್ತು. ಹೀಗೆ ರಸ್ತೆಯಗುಂಟ ನಡೆಯುತ್ತಲೇ ಇದ್ದೆ. ಯೂನಿವರ್ಸಿಟಿ ಇಲ್ಲಿಂದ ಎರಡು ಕಿಲೋಮೀಟರ್ ಇತ್ತು. ನಡೆದೆ, ನಡೆದೆ, ನಡೆದೇ ನಡೆದೆ. ಅಂದು ಭಾನುವಾರ. ಯಾವ ಅಂಗಡಿಯೂ ತೆರೆದಿರಲಿಲ್ಲ. ಊಟದ ಜಾಗಗಳೂ ಸಂಜೆ ಐದರ ನಂತರ ತೆರೆಯುವ ಸೂಚನೆಗಳನ್ನು ಹೊತ್ತು ನಿಂತಿದ್ದುವು. ಕಡೆಗೂ ಯೂನಿವರ್ಸಿಟಿ ಬಂತಾದರೂ, ಸಿಮ್ಮೂ ಇಲ್ಲ; ಊಟವೂ ಇಲ್ಲ. ಸರಿ ಮತ್ತೆ ವೈಟ್ ಹೋಟೇಲಿಗೇ ಬಂದು ಎಂ.ಟಿ.ಆರ್ ಪೊಟ್ಟಣವನ್ನು ಬಿಡಿಸುವುದೇ ಒಳಿತು ಅಂದುಕೊಳ್ಳುತ್ತಿದ್ದಾಗಲೇ ಒಂದು ಪುಟ್ಟ ಊಟದ ಜಾಗ, ವೈಟ್ ಹೋಟೇಲಿನ ಎದುರಿನಲ್ಲೇ ಕಾಣಿಸಿತು! ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೆಂದರೆ ಇದೇಯೇ.

ಬೆಲ್ಜಿಯಂ ಎರಡು ವಿಷಯಗಳಿಗೆ ಪ್ರಸಿದ್ಧಿ. ಇದು ನ್ಯಾಟೊದ ರಾಜಧಾನಿ; ಯುರೋಪಿಯನ್ ಯೂನಿಯನ್ನಿನ ರಾಜಧಾನಿ. ಇನ್ನೂ ಎರಡು ವಿಷಯಗಳಿಗೆ ಪ್ರಸಿದ್ಧಿ. ಇಲ್ಲಿನ ಚಾಕೋಲೇಟುಗಳು ವಿಶ್ವ ವಿಖ್ಯಾತ - ಎಲ್ಲಿ ಕಂಡರಲ್ಲಿ, ಕಾಫಿ ಕುಡಿದರೆ ಬಿಲ್ಲಿನ ಜೊತೆಗೂ ಚಾಕೋಲೇಟುಗಳನ್ನು ಕೊಡುವ ದೇಶ ಇದು; ಮತ್ತು ಬೆಲ್ಜಿಯಂನ ಬಿಯರುಗಳ ಭಿನ್ನತೆಯೂ ಜಗದ್ವಿಖ್ಯಾತಿ ಪಡೆದಿದೆ. ಬಿಯರು ಒಗರು ಎನ್ನುವವರಿಗೆ ಇಲ್ಲಿ ಸಿಹಿ, ನಿಂಬೆ ರುಚಿಯ, ಬಿಯರುಗಳೂ ದೊರೆಯುತ್ತವೆ. ಪ್ರತಿ ಬಿಯರಿಗೂ ಅದರದೇ ಗ್ಲಾಸಿದೆ. ಹಾಗೂ ಆ ಗ್ಲಾಸಿನಲ್ಲೇ ಕುಡಿಯಬೇಕಂತೆ. ಬಿಯರು ಕುಡಿಯುವ ಪ್ರಕ್ರಿಯೆಯೂ ಒಂದು ಸಂಪೂರ್ಣ ಅನುಭವ ಎಂದು ಇಲ್ಲಿಯವರು ಹೇಳುತ್ತಾರೆ. ಗ್ಲಾಸು, ಅದನ್ನು ಹಿಡಿಯುವರೀತಿ, ಹಾಗೂ ಗ್ಲಾಸಿನ ಬಾಯಿಯ ವಿಸ್ತಾರ ಎಲ್ಲವೂ ಬಿಯರು ಕುಡಿಯುವಾಗಿನ ಒಂದು ಅನುಭವದ ಅಂಗ - ಪಂಚೇಂದ್ರಿಯಗಳೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಂತೆ! ಇದ್ಯಾವುದೂ ಅರ್ಥಮಾಡಿಕೊಳ್ಳಲು ಈ ಭಿನ್ನತೆಯನ್ನು ಆಸ್ವಾದಿಸುವ ಸಮಯವಾಗಲೀ, ಪರಿಕರಗಳಾಗಲೀ ನನ್ನಲ್ಲಿರಲಿಲ್ಲ. ಮೊದಲಿಗೆ ಜ್ಯೂಲಿಪರ್ ಡ್ರಾಫ್ಟ್ ಕುಡಿದೆ. ಸುಮಾರಾಗಿತ್ತು. ನಂತ್ರ ಲೆಫ್ ೯ ಹೇಳಿದೆ. ಅತೀ ಕಂದು ಬಣ್ಣದ ಈ ಬಿಯರು ಚೆನ್ನಾಗಿತ್ತು. ಎರಡು ಗ್ಲಾಸ್ ಕುಡಿಯುವ ವೇಳೆಗೆ ಮೂರಾಗಿತ್ತು. ವೈಟ್ ಹೋಟೀಲಿಗೆ ಮರಳಿದೆ.

ಈ ಬಾರಿ ನನಗೆ ಕೊಟ್ಟ ಕೋಣೆ ೯ನೆಯ ಮಹಡಿಯಲ್ಲಿತ್ತು. ಹೊಟೇಲಿನ ಲಿಫ್ಟಿನಲ್ಲಿಯೂ ಚಿತ್ತಾರಗಳನ್ನು ಬಿಡಿಸಿದ್ದರು. ಲಿಫ್ಟಿನ ಬಾಗಿಲುಗಳು ಮುಚ್ಚುವಾಗ ಎರಡೂ ದಿಕ್ಕಿನಿಂದ ಇದ್ದ ಮಾನವರ ಚಿತ್ರಗಳು ಬಂದು ಡಿಕ್ಕಿ ಹೊಡೆವಂತೆ ಚಿತ್ರಿಸಲಾಗಿತ್ತು. ನನ್ನ ಕೋಣೆಯ ಡಿಸೈನರ್ - ಲುಕ್ ಲೆಮಾಯೂನ ಪ್ರತ್ಯೇಕತೆ ಹೆಚ್ಚು ಖರ್ಚಿಲ್ಲದ, ಉತ್ತಮ ಬೆಳಕಿನ ಪರಿಕರಗಳನ್ನು ತಯಾರಿಸುವುದು. ಹೀಗಾಗಿ ಈ ಕೋಣೆಯಲ್ಲಿ ದೀಪಗಳು ಭಿನ್ನ ರೀತಿಯದ್ದಾಗಿದ್ದುವು. ಒಂದು ಉದ್ದನೆಯ ಫ್ರೆಂಚ್ ಕಿಟಕಿ, ಮತ್ತು ನಗರದ ವಿಹಂಗಮ ನೋಟ. ಬಾಗಿಲು ತೆರೆದರೆ ಹೊಡೆಯುವ ಕೊರೆಯುವ ಗಾಳಿ.
 
ಮುಂಜಾನೆ ಎದ್ದು ನಾಷ್ಟಾಕ್ಕೆ ಹೋದಾಗ ವೈಟ್ ಹೋಟೇಲಿನ ಮತ್ತೊಂದು ದೃಶ್ಯ. ಲೌಂಜಿನಲ್ಲಿ, ಹೋಟೇಲನ್ನೂ ರೂಪಿಸಿದ ಎಲ್ಲ ಡಿಸೈನರ್‌ಗಳ ಫೋಟೊ, ಅವರ ಪ್ರತ್ಯೇಕತೆ, ಅವರ ವಿಳಾಸ ಎಲ್ಲ ವಿವರಗಳಿದ್ದ ಒಂದು ವಿಹಂಗಮ ಫಲಕ. ಜೊತೆಗೆ ಇನ್ನಷ್ಟು ಆಸಕ್ತಿಕರ ವಿಷಯಗಳು. ಕಾರ್ಡ್‍ಬೋರ್ಡಿನಲ್ಲಿ ಮಾಡಿದ ರೈನ್‍ಡೀರಿನ ಪುತ್ಥಳಿ, ದೊಡ್ಡ ಗಾಜಿನ ಗೋಲಿಗಳಲ್ಲಿ ಅಡಕವಾಗಿಟ್ಟ ವಸ್ತುಗಳನ್ನು ಸೂರಿನಿಂದ ನೇತುಬಿಟ್ಟ ಪರಿ, ಮತ್ತು ಹಸಿರು ಸೇಬುಗಳಿಗೆಂದೇ ಮಾಡಿಟ್ಟ ಗೋಡೆಯಮೇಲಿನ ವಿನೂತನ ಸ್ಟಾಂಡ್.

ತಮ್ಮ ಕಲಾವಿದರನ್ನು ಒಂದೆಡೆ ಕಲೆಹಾಕಲು, ಗೌರವಿಸಲು ಒಂದು ನೂತನ ಮಾರ್ಗವನ್ನು ವೈಟ್ ಹೋಟೇಲ್ ಕಂಡುಕೊಂಡಿತ್ತು. ಹೀಗಾಗಿ, ಮಧ್ಯಾಹ್ನ ಹನ್ನೆರಡರಿಂದ ಮೂರರವರೆಗೆ ವಿನಾಕಾರಣ ಕಾಯಿಸಿ ನನ್ನನ್ನು ಸೇರಿಸಿಕೊಂಡಾಗ್ಯೂ ನನಗೆ ಈ ಅನುಭವದ ವೈಶಿಷ್ಟ್ಯತೆ ಮುಖ್ಯವೆನ್ನಿಸಿತ್ತು. ಗಮ್ಮತ್ತಿನ ವಿಷಯವೆಂದರೆ ನಾಷ್ಟಾದ ಬಫೆಯಲ್ಲಿ, ಬ್ರೆಡ್ಡು, ಮಫಿನ್ಸ್, ಹಾಲು, ಮೊಸರು, ಜಾಮ್, ಬೆಣ್ಣೆ, ಹಣ್ಣಿನ ರಸ, ಕಾಫಿ, ಟೀ, ಎಲ್ಲವೂ ಇದ್ದರೂ ನೀರು ಮಾತ್ರ ಇಲ್ಲ! ಅದೊಂದನ್ನು ಮಾತ್ರ ದುಡ್ಡು ಕೊಟ್ಟು ಹೋಟೇಲಿನಾಚೆಯ ಸೂಪರ್ ಬಜಾರಿನಲ್ಲಿ ಕೊಂಡುಕೊಳ್ಳಬೇಕು!





No comments: